ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ, ಬಂಕುರಾ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಸಿಎಂ ಮಮತಾ ಬ್ಯಾನರ್ಜಿ, ಕೋಲ್ಕತ್ತಾದಲ್ಲಿ ಅಮಿತ್ ಶಾ ಉಳಿದುಕೊಂಡಿರುವ ಹೋಟೆಲ್ನಿಂದ ಹೊರ ಬರಲು ಅನುಮತಿ ನೀಡಿರುವುದಾಗಿ ಹೇಳಿ ಬೆದರಿಕೆ ಹಾಕಿದ್ದಾರೆ.
ರಾಜ್ಯಕ್ಕೆ ಬರಲು ಅವರು ಯಾರು. ಅವರು ನಿರಂಕುಶ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. ಒಳನುಸುಳುಕೋರರಿಗಾಗಿ ಅವರು ಇದನ್ನು ಮಾಡಿದ್ದಾರೆ. ಇದು ಕೇಂದ್ರ ಗೃಹ ಸಚಿವರಿಗೆ ಮಾತ್ರವಲ್ಲದೆ ದೇಶದ ಇಡೀ ಜನಸಂಖ್ಯೆಗೆ ಬೆದರಿಕೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಬ್ಯಾನರ್ಜಿ ನೀವು ಅಮಿತ್ ಶಾ ಅವರಿಗೆ ಬೆದರಿಕೆ ಹಾಕುತ್ತಿಲ್ಲ. ಭಾರತಕ್ಕೆ ಬೆದರಿಕೆ ಹಾಕುತ್ತಿದ್ದೀರ. ಪಶ್ಚಿಮ ಬಂಗಾಳದಲ್ಲಿ ಈ ರೀತಿ ಆಗುತ್ತಿರುವುದು ಇದು ಮೊದಲಲ್ಲ. ನಮ್ಮ ಪಕ್ಷದ ಅಧ್ಯಕ್ಷ ಜೆ. ಪಿ. ನಡ್ಡಾ ಅವರ ಬೆಂಗಾವಲು ಪಡೆ ಮೇಲೆ ಕಳೆದ ಚುನಾವಣೆಗಳ ಸಮಯದಲ್ಲಿ ನುಸುಳುಕೋರರು ದಾಳಿ ಮಾಡಿದ್ದರು.
ಮಮತಾ ಬ್ಯಾನರ್ಜಿ ಊಹಿಸಲೂ ಸಾಧ್ಯವಾಗದ ಮಾತುಗಳಲ್ಲಿ ಬೆದರಿಕೆ ಹಾಕಿದ್ದಾರೆ. ಅದನ್ನು ನಾವು ನೋಡಿದ್ದೇವೆ. ಶಾ ಅವರು ಹೋಟೆಲ್ನಲ್ಲಿ ಅಡಗಿದ್ದಾರೆ. ನಾವು ಬೇಡ ಎಂದರೆ ನೀವು ಅಲ್ಲಿಂದ ಹೊರ ಬರಲು ಸಾಧ್ಯವಿಲ್ಲ. ಆದರೆ, ನೀವು ಅದೃಷ್ಟವಂತರು ನಾವು ನಿಮಗೆ ಹೋಟೆಲ್ನಿಂದ ಹೊರ ಬರಲು ಅವಕಾಶ ನೀಡಿದ್ದೇವೆ ಎಂದಿದ್ದರು.
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಒಳನುಸುಳುಕೋರರ ಸುತ್ತುವರಿದ ರಾಜಕೀಯ, ಅನ್ಯಾಯ, ಭ್ರಷ್ಟಾಚಾರದ ಕುರಿತು ಶಾ ಧ್ವನಿ ಎತ್ತಿದ್ದರು. ಟಿಎಂಸಿ ಗೂಂಡಾಗಳಿಂದ 300 ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದು, 3000ಕ್ಕೂ ಹೆಚ್ಚು ಜನರು ಮನೆ ತೊರೆದು ಹೋಗಿದ್ದಾರೆ ಎಂದು ಆರೋಪಿಸಿದ ಪಾತ್ರಾ, ಇದು ಹಿಟ್ಲರ್ ಆಡಳಿತ ಎಂದು ಟೀಕಿಸಿದರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೂರನೇ ಎರಡು ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಇದಕ್ಕಾಗಿ ಪಕ್ಷ ಸಿದ್ಧತೆ ನಡೆಸಿದೆ. ಪಶ್ಚಿಮ ಬಂಗಾಳ, ಬೆಂಗಾಲಿ ಮತ್ತು ಭಾರತೀಯರಿಗೆ ಸೇರಿದ್ದೆ ಹೊರತು ನುಸುಳುಕೋರರಿಗೆ ಅಲ್ಲ. ಅಂತಾರಾಷ್ಟ್ರೀಯ ಗಡಿಯಲ್ಲಿ ಬೇಲಿ ನಿರ್ಮಾಣಕ್ಕೆ ಜಾಗವನ್ನು ಮಮತಾ ಬ್ಯಾನರ್ಜಿ ನೀಡುತ್ತಿಲ್ಲ. ಅವರು ರಾಜ್ಯದಲ್ಲಿನ ರೋಹಿಂಗ್ಯಾ ಮತ್ತು ಒಳನುಸುಳುಕೋರರ ಬಗ್ಗೆ ಚಿಂತಿತರಾಗಿದ್ದಾರೆ. ಬಂಗಾಳದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ. ಮಮತಾ ಬ್ಯಾನರ್ಜಿಯಿಂದ ಬಂಗಾಳ ನಾಶವಾಗುತ್ತಿದೆ. ಚುನಾವಣಾ ಮತಪಟ್ಟಿಯಿಂದ ಒಳನುಸುಳುಕೋರರ ಹೆಸರನ್ನು ತೆಗೆದಿರುವುದು ಟಿಎಂಸಿ ನಾಯಕರಿಗೆ ಸಮಸ್ಯೆಯಾಗಿದೆ. ದೇಶದ ಒಳನುಸುಳುಕೋರರ ಸಲುವಾಗಿ ಮಮತಾ ಬ್ಯಾನರ್ಜಿ ದೇಶದ ಗೃಹ ಸಚಿವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಒಳನುಸುಳುಕೋರರನ್ನು ತರಲು ಟನಲ್ ನಿರ್ಮಿಸಲಾಗುತ್ತಿದ್ದು, ಅವರಿಗೆ ಗುರುತು ನೀಡುವ ಪ್ರಯತ್ನ ಸಾಗಿದೆ. ಒಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ, ಒಳನುಸುಳುಕೋರರನ್ನು ಪತ್ತೆ ಮಾಡಿ ಗಡೀಪಾರು ಮಾಡಲಾಗುವುದು. ಬಂಗಾಳವು ಹಲವಾರು ರಂಗದಲ್ಲಿ ದೇಶವನ್ನು ಮುನ್ನಡೆಸಿದ ಇತಿಹಾಸವನ್ನು ಹೊಂದಿದೆ. ಆದರೆ ಬ್ಯಾನರ್ಜಿಯವರ ಓಲೈಕೆ ರಾಜಕಾರಣದಿಂದ ರಾಜ್ಯದ ಆರ್ಥಿಕತೆ, ಕೈಗಾರಿಕರಣ ಮತ್ತು ಅಭಿವೃದ್ಧಿ ಬಹಳಷ್ಟು ನಷ್ಟ ಅನುಭವಿಸಿದೆ ಎಂದು ಅವರು ಆರೋಪಿಸಿದರು.